ಒಂದು ಸಂಸಾರದ ಕಥೆ

ಪಕ್ಕದ ಮನೆಯವರ ಸ್ಥಿತಿ ಗತಿ ತಿಳಿಯಲು ಹೊರಟಳು ಸರಳಾ...
ಮುಂದೆ,
ಭಾಗ- ೩

ಹೆಸರಿಗೆ ತಕ್ಕಂತೆ ಇದ್ದಾಳೆ ಅಂತ ಅಂದುಕೊಂಡಿದ್ದು ಸರಳಾ..
ತೆಳ್ಳನೆಯ ಜರಿ ಅಂಚಿರುವ ರೇಷ್ಮೆ ಸೀರೆ,ಅದಕೊಪ್ಪುವ ಬ್ಲೌಸ್ ,ಕೊರಳಲ್ಲಿ ದಪ್ಪನೆಯ ಮಾಂಗಲ್ಯದ ಜೊತೆಗೆ ಇನ್ನು ನಾಲಕು, ಐದು ಸರಗಳು, ಕಿವಿಯಲ್ಲಿ ಪಳಕ್ಕನೆ ಮಿಂಚಿದ ವಜ್ರದ ಬೆಂಡೋಲೆ, ಕೈ ಮುಚ್ಚಿ ಹೋಗುವಷ್ಟು ಬಂಗಾರದ ಬಳೆಗಳು ,ಮೂಡಿ ತುಂಬಾ ಹೂವು, ಹಣೆಗೆ ಕಾಸಿನಗಲ ಕುಂಕುಮ, ಮಖದ ತುಂಬಾ ನಗು...

ಬನ್ನಿ..ಎನ್ನುತ್ತಾ ಅಲ್ಲೇ ಇದ್ದ ಸೋಫಾ ಕಡೆ ಕೈ ತೋರಿಸಿದಳು ಮಹಾಲಕ್ಷ್ಮಿ .
ಮನೆಯ ಅವಲೋಕನ ಮಾಡುತ್ತಲೇ ಸೋಫಾ ಮೇಲೆ ಕುಳಿತಳು ಸರಳಾ, ಬಲು ಮೆತ್ತನೆಯ ಸೋಫಾ ಅದು. ಕುಳಿತರೆಲ್ಲಿ ಕೊಳೆಯಾಗುವುದೋ ಎನ್ನುವಂತಿತ್ತು.ಮೂಲೆಯಲ್ಲಿ ಜೀವ ಬಿಗಿಯಾಗಿ ಹಿಡಿದುಕೊಂಡು ಕುಳಿತಳು ಸರಳಾ.ಕಣ್ಣು ಆ ದೊಡ್ಡ ಹಾಲ್ ತುಂಬಾ ಹರಿದಾಡಿದವು. ದೊಡ್ಡ ದೊಡ್ಡ ಸೋಫಾಗಳು ಒಂದು ಕಡೆಯಿಂದ ಕುಳಿತಿದ್ದರೆ, ಮುಂದೆಯೇ ದೊಡ್ಡದೆನಿಸುವ ಟಿ, ವಿ,
ಪಕ್ಕದಲ್ಲೇ ಸ್ಪೀಕರ್ಗಳು, ಅದರಿಂದ ಎಂಥದೋ ಭಾವಗೀತೆ ಮೆಲ್ಲನೆ ಬರುತಿತ್ತು. ನೆಲಕ್ಕೆ ಹಾಸಿದ ಕೆಂಪನೆಯ ರತ್ನಗಂಬಳಿ ,ಮಧ್ಯದಲ್ಲೊಂದು ಬಂಗಾರದ ಅಂಚಿನ ಟೇಬಲ್, ಅದರ ಮೇಲೊಂದು ಹೂದಾನಿ, ತಲೆ ಎತ್ತಿ ನೋಡಿದರೆ ಲೈಟುಗಳುಳ್ಳ ಫ್ಯಾನ್, ಸುಸ್ತಾಗಿ ಹೋದಳು ಸರಳಾ,
ನಿನ್ನೆನೇ ಬಂದೆವಲ್ಲ..ಇನ್ನು ಸುಮಾರು ಸಾಮಾನುಗಳ ಜೋಡಿಸಬೇಕು ..
ಸರಳಾಳ ನೋಟವನ್ನು ಹಿಂಬಾಲಿಸಿದ ಮಹಾಲಕ್ಷ್ಮಿ ನುಡಿದಳು..
ಆಗ ತಟ್ಟನೆ ಎಚ್ಛೆತ್ತ ಸರಳಾ ಈ ಸ್ವೀಟ್ಸ್ ತಗೊಳ್ಳಿ
ಎನ್ನುತ್ತಾ ಕೈಯಲ್ಲಿದ್ದ ಡಬ್ಬಿಯನ್ನು ಆಕೆಯ ಕೈಗೆ ವರ್ಗಾಯಿಸಿದಳು.
ಏನಾದರೂ ಸಹಾಯ ಬೇಕಿದ್ದರೆ ಹೇಳಿ. ನಾವಿಲ್ಲೇ ಪಕ್ಕದಲ್ಲೇ ಇರೋದು.
ಎಂದಳು.
ಇವರು ಇರುವ ಸ್ಥಿತಿ ನೋಡಿದರೆ, ನಮ್ಮ ಸಹಾಯದ ಅಗತ್ಯ ಇಲ್ಲ ಅಂತ ಅನ್ನಿಸಿದರೂ ಬಾಯಿ ಮಾತಿಗೆ ಹೇಳಿದ್ದಳು. ಮನದಲ್ಲೇ ಹೇಗಾದರೂ ಮಾಡಿ, ಇವರ ಸ್ನೇಹ ಸಂಪಾದಿಸಿ, ನಾವೂ ಇವರಂತೆ ಆಗಲೇ ಬೇಕು ಎನ್ನುವ ನಿರ್ಧಾರ ಮಾಡಿಬಿಟ್ಟಳು.ಕ್ಷಣಿಕ ವಸ್ತುಗಳ ಆಸೆ ಆಕೆಯನ್ನು ಅಲ್ಲೋಲ ಕಲ್ಲೋಲ ಮಾಡುತಿತ್ತು...
ಕ್ಷಣ ಕ್ಷಣಕ್ಕೂ ಆಕೆಯ ಆಸೆ ಬಿಡದೇ ಬೆನ್ನತ್ತಿ ಬಂದಂತೆ ಅನ್ನಿಸಿತು.ಆ ಸಮಯದಲ್ಲಿ
ವೈಭವದ ಜೀವನವೇ ಸುಖದ ಜೀವನ ಎನ್ನುವ ಪರಿಕಲ್ಪನೆಗೆ ಬಂದು ನಿಂತಳು.
ನಾನಿನ್ನು ಬರ್ತೀನಿ ರೀ...
ಎನ್ನುತ್ತಾ ಮೇಲೆದ್ದಾಗ,
ಕೊಂಚ ಜ್ಯೂಸು ತಗೊಳ್ಳಿ.
ಎನ್ನುತ್ತಿರುವಂತೆ, ಒಳಗಿನಿಂದ ಜ್ಯೂಸು ತಂದು ಸರಳಾ ಕೈಗೆ ಕೊಟ್ಟ ಕೆಲಸದವ...
ತಣ್ಣನೆಯ ಜ್ಯೂಸು, ಸುಂದರ ಗಾಜಿನ ಗ್ಲಾಸ್ಸಲ್ಲಿ...!
ಒಮ್ಮೆ ಅದನ್ನು ನೋಡಿ, ಹಣ್ಣಿನ ರಸವನ್ನು ಗುಟುಕರಿಸಲಾರಂಭಿಸಿದಳು.
ಜ್ಯೂಸು ಮುಗಿಸಿ, ಎದ್ದು ನಿಂತಳು..

ಮನೆ ಕಡೆ ಹೆಜ್ಜೆ ಹಾಕುವಾಗ ಅವಳೊಬ್ಬಳು ಬೇರೆ ವ್ಯಕ್ತಿನೇ ಆಗಿದ್ದಳು.
ಮನೆ ಒಳಗೆ ಬರುತ್ತಿದ್ದಂತೆ, ಮುರಿದ ಆಟದ ಸಾಮಾನುಗಳ ಹರಡಿಕೊಂಡು ಕುಳಿತು ಆಡುತಿದ್ದ ಪಾಪು ಕಂಡಿತು.ಅದರೊಟ್ಟಿಗೆ ಆಡಿಸುತ್ತಾ ಕುಳಿತ ಸಾಕಮ್ಮ...! ಮೂಲೆಯಲ್ಲಿದ್ದ ಹರಕು ಸೋಫಾ ಅವಳನ್ನು ಅಣಕಿಸಿದಂತಾಯಿತು ..ಯಾವುದೋ ಹಾಡನ್ನು ಬಿತ್ತರಿಸುತಿದ್ದ ದೂಳು ಹಿಡಿದ ಚಿಕ್ಕ
ಟಿ. ವಿ.,....
ತನ್ನ ಈ ಸಂಸಾರ ನೋಡಿ ಸಿಟ್ಟು ಉಕ್ಕೇರಿತು. ಏನಿದು ಹಾಳು ಸಂಸಾರ....ಯಾರಾದರೂ ಬಂದರೆ ಕುಳಿತುಕೊಳ್ಳಲು ಒಂದು ಒಳ್ಳೆ ಸೋಫಾ ಇಲ್ಲ..ಟಿ, ವಿ, ಇಲ್ಲ..ಎಲ್ಲಿ ನೋಡಲ್ಲಿ ಹರಕು, ಮುರುಕು....
ಸಿಡುಕಿದಳು ಒಮ್ಮೆ.

ಇಷ್ಟು ದಿನ ಕಾಣದ ತಪ್ಪುಗಳೆಲ್ಲ ಆ ವಸ್ತುಗಳಲ್ಲಿ ಕಾಣತೊಡಗಿದವು.
ಸೊಸೆಯ ಮುಖ ನೋಡಿ ತಿಳಿದುಕೊಂಡ ಸಾಕಮ್ಮ ಮೆತ್ತಗೆ, ಏನಾಯಿತಮ್ಮ?
ಸೊಸೆ ಪಕ್ಕದ ಮನೆಗೆ ಡಬ್ಬ ಹಿಡಿದು ಹೋಗಿದ್ದು ನೋಡಿದ್ದರು .ಅಲ್ಲೇ ಏನೋ ಆಗಿದೆ. ದೊಡ್ಡವರು, ಶ್ರೀಮಂತರು ..ಏನೋ ಸೊಸೆಗೆ ಅಂದು ಕಳಿಸಿದ್ದಾರೆ. ಅದಕ್ಕೆ ಇವಳಿಗೆ ಬೇಜಾರಾಗಿದೆ .ಅಂದುಕೊಂಡು ,

ಹೋಗಲಿ ಬಿಡಮ್ಮ, ಅವರ ಪಾಡಿಗೆ ಅವರು. ನಮ್ಮ ಪಾಡಿಗೆ ನಾವು ಇದ್ದರಾಯಿತು .
ವಿಷಯಕ್ಕೆ ಮಂಗಳ ಹಾಡಲು ಪ್ರಯತ್ನಿಸಿದರು.
ಅಮ್ಮನ ಬಳಿ ಹೋಗಲು ಹಾತೊರೆಯುತ್ತಿದ್ದ ಮಗುವನ್ನು ತಾವೇ ಸಮಾಧಾನಿಸಿ ಒಳಗೆ ಕರೆದುಕೊಂಡು ಹೋದರು.
ಪುಟ್ಟ..ಚಕ್ಕಲಿ ಬೇಕಾ?ತುಂಬಾ ರುಚಿ ಇದೆ. ಬಾ ಕೊಡ್ತೀನಿ.
ಪಾಪು ಅವರನ್ನು ಹಿಂಬಾಲಿಸಿತು.
ಸರಳಾ ದೊಪ್ಪನೆ ಬಂದು ಹಾಸಿಗೆಗೆ ಬಿದ್ದಳು.ಮತ್ತೆ ಅವಳ ದೃಷ್ಟಿ ಹೊದಿಕೆ, ಹಾಸಿಗೆ ಮೇಲೆ ಹೋಯಿತು.
ಯಾವುದೋ ಸುಮಾರಾದ ಬಟ್ಟೆ .ಒಂದೂ ಬೆಲೆಯುಳ್ಳದ್ದಲ್ಲ .ಯಾಕೋ ತಾವು ತೀರಾ ಕನಿಷ್ಟದವರು ಅಂತ ಅನ್ನಿಸಲಾರಂಭಿಸಿತು.
ಹೊಟ್ಟೆ ಹಸಿದಿದ್ದರೂ ಮೇಲೇಳದೇ ಹಾಗೆಯೇ ಉರುಳಾಡುತಿದ್ದಳು.
ಊಟದ ಸಮಾಯವಾದರೂ ಸೊಸೆ ಬರಲಿಲ್ಲ ಅಂತ ಸಾಕಮ್ಮ ಕರೆಯಲು ಬಂದರು.
ಸೊಸೆ ಮುಖ ಮುಚ್ಚಿಕೊಂಡು ಮಲಗಿರುವದ ಕಂಡು, ಮಾತಾಡದೇ ಮೆತ್ತಗೆ ಹಾಗೆಯೆ ಬಂದರು.
ಬಲು ಸೂಕ್ಷ್ಮ, ಮೆತ್ತಗಿನ ಜೀವ ಆಕೆಯದು.ಸರಳಾ ಮನೆಗೆ ಬಂದಾಗ ,ನನಗೊಬ್ಬಳು ಮಗಳು ಸಿಕ್ಕಳು ಅಂತ ಹೆಮ್ಮೆಯಿಂದ ಎಲ್ಲರೆದುರು ಹೇಳಿದ್ದರು.ಈಗ ಆಕೆ ಉಣ್ಣದಿರುವುದು ಕಂಡು ಪಾಪುಗೆ ಒಂದು ತುತ್ತು ತಿನ್ನಿಸಿ,ತಾವೂ ಹಾಗೆಯೇ ಪಾಪುವಿನ ಪಕ್ಕ ಉರುಳಿದರು.
ಅಮ್ಮ...ಅಮ್ಮ...
ಮಗನ ಧ್ವನಿ ಬಂದಂತಾಗಿ ,ಮೆಲ್ಲನೆ ಮೇಲೆದ್ದಾಗ ಸಂಜೆಯಾಗಿ ಸೂರ್ಯ ಮುಳುಗುತಿದ್ದ .ಅಯ್ಯೋ..ನನಗೇನಾಯಿತು ? ಹೀಗೆ ಮಲಗಿಬಿಟ್ಟೆ..
ಸಂಜೆಯಾಯಿತು ,ದೇವರಿಗೆ ದೀಪ ಹಚ್ಚಬೇಕು.
ಅಂತ ಮೇಲೆದ್ದರು. ಇವರ ಜೊತೆ ಮಲಗಿದ್ದ ಪಾಪು ಕೂಡ ಮೇಲೆದ್ದು ಅಳತೊಡಗಿತು ...
ಸರಳಾ..ಸರಳಾ...
ಗಂಡನ ಕೂಗಿಗೆ ಉತ್ತರವಿಯದೇ ಬಚ್ಚಲಿಗೆ ಹೋಗಿ, ಮುಖಕ್ಕೆ ನೀರು ಹಾಕಿದಳು ಸರಳಾ.
ಏನು ಇದು ಎಲ್ಲ ಮಲಗಿದ್ದೀರಾ?
ನಡೆಯಿರಿ ಬೇಗ ಬೇಗ ರೆಡಿ ಆಗಿ. ಒಂದು ಒಳ್ಳೆ ಸಿನಿಮಾ ಬಂದಿದೆ. ಒಟ್ಟಿಗೆ ಹೋಗಿ ನೋಡಿ ಬರೋಣ.
ಮಗ ವೇಣು ಉತ್ಸಾಹದಿಂದ ಹೇಳುತಿದ್ದರೆ, ಸಾಕಮ್ಮ, ನೀವಿಬ್ಬರೂ ಹೋಗಿ ಬನ್ನಿ. ನಂಗ್ಯಾಕೋ ತಲೆ ನೋವು. ಪಾಪು ಜೊತೆ ಮನೆಯಲ್ಲಿ ಇರ್ತೀನಿ.
ಎಂದರು.
ವೇಣು ಓಡಿ ಬಂದು, ಯಾಕಮ್ಮ ಏನಾಯಿತು?
ಡಾಕ್ಟರ್ ಹತ್ತಿರ ಹೋಗೋಣವೆ?

ಮುಂದುವರೆಯುವುದು ......

Leave a Review

Share your thoughts and read what others had to say

Your Review

Did this story spark a memory or artistic inspiration? Share your thoughts below.

★ ★ ★ ★ ★
🌸

No reviews yet

Be the first to share your thoughts on this story!

← Previous Story ಒಲವಿನ ರಾಗ
Connect with Me