ಒಲವಿನ ರಾಗ

ನಿಶಾ..ನಿಶಾ..ಎಲ್ಲಿದ್ದೀಯ?
ಹೆಂಡತಿಯ ಕೂಗುತ್ತ ಮನೆ ಒಳ ಬಂದ ಪ್ರಶಾಂತ್.
ಕೈಯಲ್ಲಿದ್ದ  ಬ್ಯಾಗ್ ಹೊತ್ತು ಒಳ ಬಂದ.
ಉಷಪ್ಪ!!..ಕೈಯಲ್ಲಿದ್ದ  ಬ್ಯಾಗ್ ನೆಲದಲ್ಲಿಟ್ಟ.

ಅಡುಗೆ ಮನೆಗೆ ಹೋಗಿ ನೀರು ಕುಡಿದ.ಹಾಗೆ ಅಡುಗೆ ಮನೆ ನೋಡಿದ.ಒಂದೂ ವಸ್ತು ಸರಿಯಾದ ಜಾಗದಲ್ಲಿಲ್ಲ.ಮಾಡಿದ ಅಡುಗೆ ಮುಚ್ಚುವರಿಲ್ಲದೇ  ಬಾಯಿ ತೆರೆದುಕೊಂಡು ಕುಳಿತಿದೆ.ಯಾವ್ಯಾವೋ ಹುಳುಗಳು  ಅದರ ಸುತ್ತ ಓಡಾಡುತ್ತಿವೆ. ನೊಣಗಳು  ಗುಯೆನ್ನುತ್ತ  ಓಡಾಡುತ್ತಿವೆ ಹೆಚ್ಚಿದ ಈರುಳ್ಳಿ ಸಿಪ್ಪೆ, ಲಿಂಬೆ ಹಣ್ಣಿನ ಸಿಪ್ಪೆ, ಉಳಿದಿರೋ ಕರಿಬೇವಿನ ಸೊಪ್ಪು ಎಲ್ಲ ಅಲ್ಲೇ ಬಿದ್ದಿವೆ.
ಯಾಕೋ ಇವತ್ತು ಹೆಂಡತಿಯ ಮೂಡು ಸರಿ ಇಲ್ಲ ಅಂತ ಅರ್ಥವಾಯಿತು.ಅವಳಿಗಾಗಿ ಮನೆಯಲ್ಲ ಹುಡುಕಿದ.

ಎಲ್ಲಿಯೂ ಅವಳ ಸುಳಿವಿಲ್ಲ.

ಎಲ್ಲಿ ಹೋದಳು??
ಮನೆಯಲ್ಲ ಹುಡುಕಿದ.
ಕೊನೆಗೆ ಕಂಡದ್ದು ಬೆಡ್ರೂಮ್ ಬಾಲ್ಕನಿಯಲ್ಲಿ.
ಬಾಲ್ಕನಿಯಲ್ಲಿ ಕುಳಿತು, ಗಲ್ಲಕ್ಕೆ  ಕೈ ಕೊಟ್ಟು ಓಡಾಡುವ ವಾಹನಗಳ ನೋಡುತಿದ್ದಾಳೆ.ಇವರ ಮನೆ ಪಕ್ಕವೇ ಮೇನ್ ರೋಡ್ ಇದ್ದುದರಿಂದ ಸಾಕಷ್ಟು ವಾಹನ ಸಂಚಾರವಿತ್ತು.ದೊಡ್ಡ ಗಾಡಿಗಳು, ಚಿಕ್ಕ ಗಾಡಿಗಳು ಎಲ್ಲ ಇವರ  ಬಾಲ್ಕನಿಯಿಂದ ಕಾಣಿಸುತಿದ್ದವು.
ಬುರ್ರೆಂದು  ಓಡಾಡುವ ಗಾಡಿಗಳ  ಸದ್ದು.

ಏನೇ ಇದು ಬಾಗಿಲು ಹಾಗೇ ಬಿಟ್ಟು ಇಲ್ಲಿ ಬಂದು ಕುಳಿತಿದ್ದೀಯಾ?ಇದು ಬೆಂಗಳೂರಮ್ಮ.ಕ್ಷಣ ಮಾತ್ರದಲ್ಲಿ   ಎಲ್ಲ  ಮಾಯ ಆಗುತ್ತವೆ ನಮ್ಮೂರಲ್ಲ ಇದು.

ನಗುತ್ತ ಹೆಂಡತಿಯ ಭುಜ ಬಳಸಿದ.ಎಲ್ಲಿ ಯಾವ ಸಾಮ್ರಾಜ್ಯವಿದೆ ಕೊಳ್ಳೆ ಹೊಡೆಯಲು?
ಗಂಡನ ಕೈ ಸರಿಸುತ್ತ ಹೇಳಿದಳು ನಿಶಾ.
ಏನೇ ಹಾಗೆಂದರೆ?..

ಏನಿದೆ ನಮ್ಮ ಮನೆಯಲ್ಲಿ ಹೊತ್ತು ಹೋಗುವದಕ್ಕೆ ಅಂದೇ..
ಬಿರುಸಾಗಿ ಬಂತು ಈ ಸಲ ಮಾತು.
ಯಾವಾಗ ಬಂದಿರಿ?..ಕುಡಿಯಲು  ತಿನ್ನಲು ಏನಾದರೂ ಬೇಕಾ?
ಅಂತ ಬಾಯಿ ಮಾತಿಗೂ ಕೇಳಲಿಲ್ಲ.
ಸುಸ್ತಾಗಿ ಬಂದ  ಗಂಡನ್ನ   ವಿಚಾರಿಸಬೇಕು ಅಂಥ
ಚೂರೂ ಅನಿಸಲಿಲ್ಲ ಅವಳಿಗೆ ..

ಹೋಗಲಿ ಬಿಡು.ಯಾಕೆ ಆ ಮಾತು?..ನೋಡು ಬಾ ಏನು ತಂದಿದ್ದೀನಿ ಅಂತ.ಹೆಂಡತಿಯ ರಮಿಸುವ ಧ್ವನಿಯಲ್ಲಿ ಹೇಳಿದ ಪ್ರಶಾಂತ್.
ಇರ್ಲಿ ಬಿಡ್ರಿ..ಆಮೇಲೆ ನೋಡ್ತೀನಿ. ನಿರುತ್ಸಾಹದ ಧ್ವನಿ  ನಿಶಾಳದು.

ನಿಶಾ, ಪ್ರಶಾಂತ್ ಮದುವೆ ಆಗಿ ೧೦ ವರ್ಷಗಳಾಗಿದ್ದವು.ಪ್ರೀತಿಯ ಸಂಕೇತವಾಗಿ  ೫ ವರ್ಷದ ಸಾನ್ವಿ ಹುಟ್ಟಿದ್ದಳು.ನಿಶಾ ,ಪ್ರಶಾಂತ್ ಸಾಧಾರಣ ಮಾಧ್ಯಮ ವರ್ಗದಿಂದ ಬಂದವರು.ನಿಶಾ ತುಂಬಾ ಸುಂದರವಾಗಿದ್ದುದು ಅವಳ ಅಪ್ಪ ಅಮ್ಮನಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು..ಸೆರಗಿನಲ್ಲಿ ಬೆಂಕಿಕಟ್ಟಿಕೊಂಡಂತೆ ಆಗಿತ್ತು ಅವರಿಗೆ ...ಪುಂಡು ಪೋಕರಿಗಳು  ನಿಶಾಳನ್ನು   ಛೇಡಿಸಲು ಮನೆ ಮುಂದೆನೇ ಓಡಾಡುತ್ತಿದ್ದರು..ಹೀಗಾಗಿ  ಯಾವುದೊ ಒಂದು ಒಳ್ಳೆ ಸಂಬಂಧ ಸಿಕ್ಕರೆ ಮದುವೆ ಮಾಡಿ ಕೈ ತೊಳೆದುಕೊಳ್ಳಬೇಕೆನ್ನುವುದು ಅವರ ಆಸೆ.
ಗೊತ್ತಿರುವವರಿಗೆ ,ಅಲ್ಲಿ, ಇಲ್ಲಿ ಹೇಳಿ ಇಟ್ಟಿದ್ದರು.
ಹೇಗಿದ್ದರೂ ನಿಶಾಳ ಓದು ಮುಗಿದಿತ್ತು.ಸರಿಯಾದ ವರ ಸಿಕ್ಕರೆ ಸಾಕು ಮದುವೆ ಮಾಡಿ ಮುಗಿಸಲಿಕ್ಕೆ ಕಾತುರದಿಂದ ಕಾಯುತಿದ್ದರು.

ಆಗ ಯಾರೋ ಹೇಳಿದ್ದ ವರ ಮಹಾಶಯನೇ  ಈ ಪ್ರಶಾಂತ್.
ನೌಕರಿ ಬೆಂಗಳೂರಿನಲ್ಲಿ.ಒಬ್ಬನೇ ಮಗ...ಯಾವುದೇ ಕಿರಿ ಕಿರಿಗಳಿಲ್ಲ..ದುಶ್ಚಟಗಳಿಲ್ಲ ಅವನ ಅಪ್ಪ ಅಮ್ಮ ಇದ್ದುದು  ಹಳ್ಳಿ ಊರಲ್ಲಿ..ಪಟ್ಟಣದ ಸನಿಹಕ್ಕೂ ಬರಲು ಇಷ್ಟವಿಲ್ಲ ಅವರಿಗೆ.ಹಾಗಾಗಿ ಇವನೊಬ್ಬನೇ ಕೈ ಬಾಯಿ ಸುಟ್ಟುಕೊಂಡು ಹೇಗೋ ಅಡುಗೆ ಮಾಡಿಕೊಳ್ಳುತಿದ್ದ.ಯಾರೋ ಹೇಳಿದರು ಹೀಗೆ ಒಂದು ಹುಡುಗಿ ಇದೆ.ತುಂಬಾ, ತುಂಬಾ ಸುಂದರಿ..ಆದರೆ ತಂದೆ ತಾಯಿ ಬಡವರು... ಗಂಡು ಹುಡುಕುತ್ತಿದ್ದಾರೆ.ಬೇಕಾದರೆ ನೀವು ನೋಡಿ ಅಂತ.
ಚಂದ ತೆಗೆದುಕೊಂಡು ಏನು ಮಾಡಲಿ?.ಒಟ್ಟಿನಲ್ಲಿ ಒಳ್ಳೆಯವಳಾಗಿದ್ದರೆ ಸಾಕು,ಅವಳಲ್ಲಿ   ಹೃದಯವಂತಿಕೆ ಇದ್ದರೆ   ಸಾಕು..ಅಂತ ಹುಡುಗಿ ನೋಡೋ  ಶಾಸ್ತ್ರಕ್ಕೆ ಹೂ ಅಂದ..
ಅವನ ಅಪ್ಪ ಅಮ್ಮ ಮಗ ಹೇಗೆ ಹೇಳುತ್ತಾನೋ ಹಾಗೆ ಅಂದರು.

ಅಪ್ಪ ಅಮ್ಮನೊಡನೆ ಹೋಗಿ   ಹುಡುಗಿಯನ್ನ ನೋಡಿ ಬಂದ.
ಮನಸ್ಸಿಗೆ ತುಂಬಾ ಹಿಡಿಸಿದ್ದಳು ನಿಶಾ.ತನ್ನ ಒಪ್ಪಿಗೆ ಕೊಟ್ಟು ಬಂದಿದ್ದ.ಅವನ ಅಪ್ಪ ಅಮ್ಮನಿಗೂ ಸೊಸೆ ತುಂಬಾ ಹಿಡಿಸಿದ್ದಳು.ರತಿಯಂಥ  ಹೆಂಡತಿ  ಸಿಕ್ಕಳು  ನಿನಗೆ ಅಂತ ನಿಶಾ ಫೋಟೋ ನೋಡಿದ ಸ್ನೇಹಿತರೆಲ್ಲ ಹೇಳಿದ್ದರು.ಇವನೋ ಸುಮ್ಮನೆ ನಕ್ಕಿದ್ದ.

ತನ್ನ ಸೌಂದರ್ಯಕ್ಕೆ ದೊಡ್ಡ ಸಿರಿವಂತರೇ ಬರುತ್ತಾರೆ ಎಂದುಕೊಂಡ ನಿಶಾಳಿಗೆ ಅತೀವ ನಿರಾಸೆಯಾಗಿತ್ತು.ತನ್ನ ರೂಪಿನ ಮುಂದೆ ಪ್ರಶಾಂತನದು ತೀರಾ ಸಾಧಾರಣ.ಏನೋ ಕಣ್ಣು ಮೂಗು ಪರ್ವಾಗಿಲ್ಲ..ಬಣ್ಣ ಸಾದಗಪ್ಪು ..
ಬೇರೆ ದಾರಿ ಕಾಣದೆ ಅಸಮಾಧಾನದಿಂದಲೇ ಅವನನ್ನು ಮದುವೆ ಆಗಲಿಕ್ಕೆ ಒಪ್ಪಿಗೆ ತಿಳಿಸಿದ್ದಳು.
ಮುಂದೆ ಮದುವೆ ಆದ ಮೇಲೆ  ತನ್ನ ಕಣ್ಣೋಟದಲ್ಲಿ ಕುಣಿಸಿದರಾಯಿತು ..ಪಾಪದ ಪ್ರಾಣಿ ಅಂತ ಅನಿಸುತ್ತೆ  .ಅಂತ ಅಂದುಕೊಂಡಿದ್ದಳು.
ಮುಂದೆ  ಹೂವೆತ್ತಿದಂತೆ  ಸರಳವಾಗಿ ಮದುವೆ ನಡೆದು ಹೋಯಿತು.
ನಿಶಾ ಈಗ ಮಿಸ್ಸೆಸ್ ಪ್ರಶಾಂತ್ ಆಗಿ ಹೋದಳು.
ಬೆಂಗಳೂರಿನಲ್ಲಿ ಸಂಸಾರ ಶುರು ಆಯಿತು.

ನಿಶಾ ತಂದೆ ತಾಯಿ, ಪ್ರಶಾಂತ್ ತಂದೆ ತಾಯಿ ಯಾವಾಗಲೋ ಒಮ್ಮೆ ಬಂದು ಹೋಗುತಿದ್ದರು.ಪ್ರಶಾಂತನಿಗೋ  ಒಂದು  ದೊಡ್ಡ ಕಂಪನಿಯಲ್ಲಿ  ಕೆಲಸ.ಕಂಪನಿಯೇನೋ ದೊಡ್ಡದೇ ..ಆದರೆ ಇವನದು ಚಿಕ್ಕ ನೌಕರಿ.
ಅದರ ತಕ್ಕಂತೆ ಸಂಬಳ..

ಹಾಗೂ ಹೀಗೋ ಕಷ್ಟ ಪಟ್ಟು ಒಂದು ಸ್ವಂತ ಫ್ಲಾಟ್ ಮಾಡಿಕೊಳ್ಳುವದರಲ್ಲಿ ಸುಸ್ತಾಗಿದ್ದ..ಬ್ಯಾಂಕಿನಲ್ಲಿ ಲೋನ್ ಮೇಲೆ ಮನೆ  ತೆಗೆದುಕೊಂಡಿದ್ದರಿಂದ .ತಿಂಗಳು, ತಿಂಗಳು ಕಂತು ಕಟ್ಟಿ ಉಳಿದ ಹಣದಲ್ಲಿ  ಸಂಸಾರ ನೀಗಿಸುವದರಲ್ಲಿ ಸಾಕಾಗಿ ಹೋಗುತಿತ್ತು.

ದೊಡ್ಡ ಊರು ಅದಕ್ಕೆ ತಕ್ಕಂತ ಖರ್ಚುಗಳು ..

ನಿಶಾ ಬಲು ಸುಂದರ ಹೆಣ್ಣುಮಗಳು.ಬಿಳಿ ಮೈ ಬಣ್ಣ, ತಿದ್ದಿ ತೀಡಿದಂಥ ಕಣ್ಣು ಮೂಗು,ನೈಸರ್ಗಿಕವಾಗಿ  ಗುಲಾಬಿ ಬಣ್ಣ ಹೊಂದಿದ ತುಟಿಗಳು,ಪುಟ್ಟ ಗದ್ದ, ಅದರ ಮೇಲೊಂದು ಕಪ್ಪಾದ ಮಚ್ಛೆ...ದೃಷ್ಟಿ ಬೊಟ್ಟಿನಂತೆ.ದಟ್ಟವಾದ  ಕೇಶ ರಾಶಿ,
ಪರಿಪೂರ್ಣವಾದ ಮೈ ಕಟ್ಟು..ಒಂದು ಮಗುವಿನ ತಾಯಿ ಎನ್ನುವಂತೇ ಇರಲಿಲ್ಲ ಆಕೆ.ತನ್ನ ದೇಹ ಸಿರಿಯನ್ನು  ಮುಚ್ಚಟೆಯಿಂದ  ಕಾಪಾಡಿಕೊಂಡು ಬಂದಿದ್ದಳು.ಅದು ಅವಳ   ಹೆಮ್ಮೆ ಕೂಡ.

ಎಷ್ಟು ಚೆನ್ನಾಗಿ ಮೇಂಟೈನ್ ಮಾಡಿದ್ದೀರಾ?ಇನ್ನು ಕಾಲೇಜು ಹುಡುಗಿಯಾದ್ದೀರಾ ..
ಅಂತ
ಯಾರಾದರೂ ನೆಂಟರು,ಸ್ನೇಹಿತರು  ಹೇಳಿದರೆ  ನಿಶಾ ಖುಷಿಯಿಂದ ,ಕತ್ತು ಕೊಂಕಿಸಿ, ಥ್ಯಾಂಕ್ಸ್ ಅನ್ನುತ್ತಿದ್ದಳು.ಕನ್ನಡಿಯ ಮುಂದೆ ನಿಂತರೆ  ತನ್ನನ್ನೇ ತಾನು ಮರೆಯುತಿದ್ದಳು.ಅವಳ ಮುಂದೆ ನೋಡಿದರೆ  ಪ್ರಶಾಂತ್ ಸಪ್ಪೆ.ಸಾಧಾರಣ ಬಣ್ಣದವ..,ಸದಾ ನಗುವ ಮುಖ..ಶಾಂತ,ಸರಳ ಸ್ವಭಾವದವ.ತಾನು ಗಂಡನಿಗಿಂತ ಬಲು ಸುಂದರಿ ಅಂತ  ಜಂಭ ಆಕೆಗೆ.
ನಿಮ್ಮದೇನೋ ಅದೃಷ್ಟ ನಾನು ಸಿಕ್ಕಿದ್ದೀನಿ  ನೋಡಿ.
ಅಪ್ಪಾ ಆಮ್ಮನ ನೋಯಿಸಬಾರದು ಅಂತ ಈ ಮದುವೆಗೆ ಒಪ್ಪಿಕೊಂಡೆ.

ಗಂಡನ ಎದುರೇ ಹೇಳುತ್ತಿದ್ದರೂ ಪ್ರಶಾಂತ್ ಸುಮ್ಮನಿರುತಿದ್ದ..ಯಾರನ್ನೂನೋಯಿಸಲಾರ...ಹೆಂಡತಿಯನ್ನಂತೂ   ಜೀವಕ್ಕಿಂತ ಹೆಚ್ಚಿಗೆ ಪ್ರೀತಿಸುತ್ತಿದ್ದ.ಅವಳು ಕೊಂಚ ನೊಂದರೂ ತಡೆದುಕೊಳ್ಳಲಾರ.ಸರಿಕರ ಮುಂದೆ ಒಳ್ಳೆ ಜೀವನ ನಡೆಸಬೇಕು ..ಭೇಷ್ ಅನ್ನಿಸಿಕೊಳ್ಳಬೇಕು..ನಮ್ಮದೊಂದು ಮಾದರಿ ಸಂಸಾರ ಆಗಬೇಕು ಅನ್ನೋದು ಅವನ ಮನದಾಸೆ.
ನಿಶಾ ಎಲ್ಲದರಲ್ಲಿ  ಮುಂದಾದರೆ  ಇವನು ಎಲ್ಲಿ ನೋಡಿದರೂ ನಿಧಾನ.ಎಲ್ಲಿಯೂ ಅವಸರವಿಲ್ಲ .

ಏನ್ರಿ ನೀವು?ಎಲ್ಲದರಲ್ಲಿ ಯಾಕಿಷ್ಟು ನಿಧಾನ?

ನಿಶಾ ಸಿಟ್ಟಿನಿಂದ ಸಿಡುಕಿದರೆ,
..ಎಲ್ಲಿಗೆ ಹೋಗುತ್ತೆ?ನಿಧಾನಕ್ಕೆ ಮಾಡಿಕೊಂಡರಾಯಿತು..ಎನ್ನುತಿದ್ದ.
.ಈ ಪ್ರವೃತ್ತಿ ಅವನ ನೌಕರಿಯಲ್ಲಿ ಕೂಡ ಮುಂದುವರೆದಿತ್ತು.ತನ್ನ ಬಡ್ತಿಗೆ ಎಂದೂ ತನ್ನ ಬಾಸ್ ಮೇಲೆ ಒತ್ತಾಯ ಹೇರಿದವನಲ್ಲ.ಶ್ರದ್ದೆಯಿಂದ ದುಡಿಯುತ್ತಿದ್ದ.ಕರ್ಮವನ್ನು ಮಾಡು ಫಲವನ್ನು ದೇವಗೆ ಬಿಡು ಎನ್ನುವ ತತ್ವದವ.ಅವನ ಈ ಗುಣವನ್ನೇ  ಬಂಡವಾಳ ಮಾಡಿಕೊಂಡ ಬಾಸ್  ಅವನ ಪ್ರಮೋಷನ್ ಬಗ್ಗೆ ತಲೇನೆ ಕೆಡಿಸಿಕೊಂಡಿರಲಿಲ್ಲ..ಬೆಳಿಗ್ಗೆ ಆದರೆ ಸೀದಾ ಆಫೀಸ್ ಸಂಜೆಯಾದರೆ ಮನೆ....ಹೆಂಡತಿ, ಮಗಳು
ಇಷ್ಟೇ ಅವನ ಪ್ರಪಂಚ.ಇದರಾಚೆ ಆತ ಯೋಚನೇನೂ ಮಾಡಲಾರ.

(ನನ್ನ  ಈ ಹೊಸ  ಧಾರಾವಾಹಿಗೆ ನಿಮ್ಮ ಬೆಂಬಲ ಅತ್ಯಗತ್ಯ.ಸಹೃದಯ ಓದುಗರಿಗೆಲ್ಲ ನನ್ನ ಆದರದ  ವಂದನೆಗಳು )

Leave a Review

Share your thoughts and read what others had to say

Your Review

Did this story spark a memory or artistic inspiration? Share your thoughts below.

★ ★ ★ ★ ★
🌸

No reviews yet

Be the first to share your thoughts on this story!

← Previous Story ಅಂತರಂಗದ ತೆರೆ ಸರಿದಾಗ
Connect with Me