ಒಲವಿನ ರಾಗ -೩

ಮುಸುಕಿನ ಜೋಳದ ಮುಂದೆ ಹೋಗಿ ನಿಂತಿತು ಪಾಪು.ಪಪ್ಪಾ ! ಅದು ಬೇಕು..ಕೈ ಮಾಡಿ ತೋರಿಸಿದಳು.ಮುಸುಕಿನ ಜೋಳದ ರಾಶಿನೇ ಹಾಕಿಕೊಂಡಿದ್ದ ಮಾರುವವ.ಬನ್ನಿ ಸರ್..ಯಾವುದು ಕೊಡಲಿ?ಉಪ್ಪು ಖಾರ ಬೇಕಾ?
ಬಾಯಿ ಮಾತಾಡುತಿದ್ದರೂ ಆತನ ಕೈ ಜೋಳವನ್ನು ಸುಲಿಯುತಲಿತ್ತು.
ಕೋಡಯ್ಯ..ಇವಳಿಗೆ ಖಾರ ಬೇಡ.ನಮ್ಮಿಬ್ಬರಿಗೆ ಖಾರ ಹಾಕು..ಹೆಂಡತಿಯನ್ನು ನೋಡಿದರೆ ಯಾವುದೋ ಧ್ಯಾನದಲ್ಲಿದ್ದಾಳೆ. ತಮ್ಮ ಸ್ಕೂಟರ್ ಮುಂದೆ ನಿಂತ ಕೆಂಪು ಬಣ್ಣದ ದೊಡ್ಡ ಕಾರನ್ನು ನೋಡುತಿದ್ದಾಳೆ.ಮಿರ ಮಿರ ಮಿಂಚುತ್ತಿದೆ.
ನಿಶಾ!.
ಗಂಡನ ಕರೆಗೆ ಏನು ಎನ್ನುವಂತೆ ನೋಡಿದಳು.ಜೋಳ ಬಿಸಿಯಾಗಿದೆ.ತಿನ್ನೋಣ ಬಾ.ಸ್ಕೂಟರ್ ಬಿಟ್ಟು ಕದಲಲಿಲ್ಲ .ಇವನೇ ತನ್ನದೊಂದು ಅವಳಿಗೊಂದು ತೆಗೆದುಕೊಂಡು,ಮಗಳ ಕೈಗೆ ಒಂದನ್ನು ಇಟ್ಟು ಅವಳಿದ್ದಲ್ಲಿಗೆ ನಡೆದ.
ನೋಡ್ರಿ ಆ ಕಾರು ಎಷ್ಟು ಚೆನ್ನಾಗಿದೆ?.ಆ ಬಣ್ಣ ನನ್ನ ಫೆವರೇಟ್..ರೀ ನಾವೂ ಯಾವಾಗ ಕಾರ್ ತೆಗೆದುಕೊಳ್ಳುವುದು ?
ಆಸೆಗಣ್ಣಿಂದ ಕಾರು ನೋಡುತಿದ್ದ ಹೆಂಡತಿಯ ನೋಡಿ ಸ್ವಲ್ಪ ಬೇಜಾರಾಯಿತವನಿಗೆ.ನನ್ನ ಸ್ಥಿತಿ ತಿಳಿದೂ ತಿಳಿದೂ ಹೀಗೆ ಕೇಳುತ್ತಳಲ್ವಾ? ಇನ್ನು ಏನಾದರೂ ಹೇಳಿದರೆ ರಾಮಾಯಣ ಮಾಡುತ್ತಾಳೆ .ಇರಲಿ ಸುಮ್ಮನಿದ್ದರಾಯಿತು.
ಮೊದ್ಲು ಜೋಳ ತಿನ್ನೇ..ಬಿಸಿ ಆರಿ ಹೋಗುತ್ತೆ.
ಪಾಪು ಕಡೆ ನೋಡಿದರೆ ಅದು ಯಾವಾಗಲೋ ತಿಂದು ಮುಗಿಸಿ,ಕೈಯನ್ನು ಫ್ರಾಕಿಗೆ ಒರೆಸುತಿತ್ತು.
ಥು!!ಚೂರೂ ಬುದ್ದಿ ಇಲ್ಲ...ನೋಡು ಫ್ರಾಕೆಲ್ಲ ಗಲೀಜು.ನೀನು ನಿಮ್ಮಪ್ಪನ ತರಹ ಕೊಳಕು..
ಹೆಂಡತಿಯ ಮಾತಿಗೆ ಯಾಕೋ ಒಂದು ತರಹ ನೋವಾಯಿತು ಪ್ರಶಾಂತನಿಗೆ.ಏನು ಮಾಡಿದರೂ ತಪ್ಪನ್ನೇ ಹುಡುಕುತ್ತಾಳಲ್ಲ??. ಛೆ!

ಅದು ಮಗು ಕಣೆ. ಏನು ತಿಳಿಯುತ್ತೆ?ಗೊತ್ತಿಲ್ಲ ಗಲೀಜು ಮಾಡಿಕೊಂಡಿದೆ.ಇರಲಿ ಬಿಡು.ನೀನು ಬಾ ಪುಟ್ಟ ಅಂತ ಎತ್ತಿಕೊಂಡು ಅದರ ಮೂಖ ತನ್ನ ಕರ್ಚಿಫ್ ನಿಂದ ಒರೆಸಿದ.
ಪಪ್ಪಾ ! ಪ್ಲಾವೆರ್ಸ್ ನೋಡೋಣ?
ನಡಿ ಪುಟ್ಟ ಅಂದು ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡ.ಆ ಕಡೆ ಒಂದು ಈ ಕಡೆ ಒಂದು ಕಾಲು ಹಾಕಿ ಅಪ್ಪನ ತಲೆ ಹಿಡಿದು ಕುತಿತದು.
ನಡೆ ನಿಶಾ...
ಗಂಡನ ಹಿಂದೆ ಹೆಜ್ಜೆ ಹಾಕಿದರೂ ತಲೆಯಲ್ಲಿ ಮಾತ್ರ
ಆ ಕೆಂಪು ಕಾರು ಭದ್ರವಾಗಿ ಕೂತಿತ್ತು.

ಉದ್ಯಾವನದಲ್ಲಿ.
ತಂಪಾದ ಗಾಳಿ,ವಾಕಿಂಗ್ ಮಾಡುವವರು ,ಸಣ್ಣ ಪುಟ್ಟ ವ್ಯಾಯಾಮ ಮಾಡುವವರು,ಗುಡ್ಡದ ಮೇಲೇರುತ್ತಿರುವ ಕ್ರೀಡಾಪಟುಗಳು ,ಅವರನ್ನು ಹುರಿದುಂಬಿಸುತ್ತಿರುವ ಅವರ ಗುರುಗಳು, ಬಣ್ಣ ಬಣ್ಣದ ಬಟ್ಟೆ ತೊಟ್ಟು ಹೆತ್ತವರೊಡನೆ ಹರಟುತ್ತ ಹೋರಾಟ ಪುಟ್ಟ ಮಕ್ಕಳು , ಮಾರುವವರು, ಕೊಳ್ಳುವವರು..ಹೀಗೆ ನಾನಾ ವಿಧ ಜನರಿಂದ ತುಂಬಿ ಹೋಗಿತ್ತು ಉದ್ಯಾನವನ.
ಅವತ್ತು ಭಾನುವಾರ ಇದ್ದುದರಿಂದ ಮತ್ತೂ ಗದ್ದಲ. .
ಸುತ್ತಲೂ ಎತ್ತರಕ್ಕೆ ಬೆಳೆದಿರೋ ಗಿಡ,ಮರಗಳು.. ಎಷ್ಟೋ ಪೀಳಿಗೆಗಳನ್ನು ಕಂಡಿದ್ದವೋ ?ಮರಗಳಲ್ಲಿ ಶಬ್ಧ ಮಾಡುತ್ತಿರುವ ಪಕ್ಷಿಗಳು, ಸುವಾಸನೆ ತುಂಬಿ ಎಲ್ಲರ ಕೈ ಬೀಸಿ ಕರೆಯುತ್ತಿರುವ ಬಣ್ಣ ಬಣ್ಣದ ಹೂಗಳು....ಆಹ್ಲಾದಕರ ವಾತಾವರಣ.
ದಿನ ನಿತ್ಯ ಧಾವಂತದಿಂದ ಒದ್ದಾಡುವ ಜನಕ್ಕೆ ಮುದ ಕೊಡುವ ಪರಿಸರ.ಜಡವಾದ ಮನಸ್ಸಿಗೆ,ದೇಹಕ್ಕೆ ಜೀವ ತುಂಬಾ ಸಂಜೀವಿನಿ ಇದು ಎಂದರೆ ತಪ್ಪಾಗಲಾರದು.ಅಲ್ಲಲ್ಲಿ ಮರಗಳ ಕೆಳಗೆ ಚಾಪೆ ಹಾಸಿಕೊಂಡು, ತಮ್ಮ ತಮ್ಮ ಮನೆಯವರೊಂದಿಗೆ ಕಾಲ ಕಳೆಯಲು ಬಂದವರೆಷ್ಟೋ ?

ಪಪ್ಪಾ ಕೆಳಗಿಳಿಸು ನನ್ನ..
ಪಾಪು ಹೇಳಿತು.ಎಷ್ಟೊಂದು ಗಲಾಟೆ ಇದೆ ಸುಮ್ನೆ ಕೂತುಕೋ..ಅಮ್ಮನ ಗದರುವಿಕೆಗೆ ಮುಖ ಚಿಕ್ಕದು ಮಾಡಿತು.ಇರ್ಲಿ ಬಿಡೆ..ಪಾಪ ಓಡಾಡಬೇಕಾಗಿದೆ ಅದಕ್ಕೆ.ಪಾಪು ನನ್ನ ಕೈ ಬಿಡಬೇಡ ತಿಳಿತಾ?.ಹೂ ಎನ್ನುವಂತೆ ತಲೆ ಹಾಕಿತು.ಮೆಲ್ಲನೆ ಕೈ ನೀಡಿ ಕೆಳಗಿಸಿದ.ಕುಣಿಯುತ್ತ ಸಾಗಿದಳು ಪಾಪು..ಬೆಲ್ ಪೂರಿ, ಉಪ್ಪು, ಖಾರ ಸವರಿದ ಹೆಚ್ಚಿಟ್ಟ ತೋತಾ ಪೂರಿ ಮಾವಿನ ಕಾಯಿ, ಸುಟ್ಟ ಶೇಂಗಾ ಕಾಯಿಗಳು, ಐಸ್ ಕ್ರೀಮ್ , ಟೀ,ಕಾಫಿ ..ಇನ್ನು ಏನೇನೋ ಹರವಿಕೊಂಡು ಕುಳಿತಿದ್ದರು ಮಾರುವವರು.ತಮಗೆ ಬೇಕಿದ್ದನ್ನು ಕೊಂಡು ಅಲ್ಲೇ ಇದ್ದ ಕೆರೆ ಕಡೆ ನಡೆದರು ನಿಶಾ,ಪ್ರಶಾಂತ್.ಅವರ ಮುಂದೆ ಕುಣಿಯುತ್ತ ಓಡುತಿತ್ತು ಪಾಪು.

ಉಷಪ್ಪ!!ಇನ್ನು ನಂಗೆ ನಡೆಯೋಕಾಗೋಲ್ಲರಿ ..ಇಲ್ಲೇ ಕುಳಿತುಕೊಳ್ಳೋಣ ಅಂದು ಅಲ್ಲೇ ಇದ್ದ ಕಲ್ಲು ಬೆಂಜೊಂದರ ಮೇಲೆ ಕುಳಿತಳು ನಿಶಾ.
ಮಗಳ ಜೊತೆ ಪ್ರಶಾಂತನೂ ಅಲ್ಲೇ ಕುಳಿತ.
ಗಿಡವೊಂದರ ಕೆಳಗೆ ಓಡುವ ಅಳಿಲುಗಳ ಹಿಡಿಯುವ ಪ್ರಯತ್ನ ಮಾಡತೊಡಗಿತು ಪಾಪು.ಪಟ್ಟನೆ ಯಾರ ಕೈಗೂ ಸಿಗದೇ ಓಡಿ ಮರವೇರುತ್ತಿದ್ದವು..
ಮಗಳ ಆಟ ನೋಡಿ ನಗುತ್ತಿದ್ದ ಪ್ರಶಾಂತ್.

ಸ್ವಲ್ಪ ಸಮಯವಾದ ಮೇಲೆ ,ಸಾಕು ಮನೆಗೆ ಹೋಗೋಣ ..ನಿಶಾ ಹೇಳಿದಾಗ ದೋಸೆ ಬೇಡವೇನೇ?ನಗುತ್ತ ಪ್ರಶಾಂತ್ ಕೇಳಿದ.ಪಪ್ಪಾ ದೋಸೆ ನಂಗೂ ಬೇಕು..ಪಾಪು ಜೊತೆ ಹೆಂಡತಿಯೂ ಧ್ವನಿ ಸೇರಿಸಿದಾಗ ಮತ್ತೆ ನಡೆಯಿರಿ ಹೋಗೋಣ ಎನ್ನುತ್ತಾ ಎದ್ದ.
ಹತ್ತಿರದಲ್ಲೇ ಇದ್ದ ಹೋಟೆಲ್ ಒಂದನ್ನು ಹೊಕ್ಕರು.

ಅದಾಗಲೇ ಹೋಟೆಲ್ ತುಂಬಾ ಜನರ ಜಾತ್ರೆ ಸೇರಿತ್ತು. ಬೀಸಿ ಬೀಸಿ ದೋಸೆ,ಇಡ್ಲಿ, ಈರುಳ್ಳಿ ಉಪ್ಪಿಟ್ಟು,ಪೂರಿ ಪಲ್ಯ,ಚೌ ಚೌ ಬಾತ್....ಜನ ತಮಗಿಷ್ಟ ಬಂದ ತಿಂಡಿ ತಿನ್ನುತಿದ್ದರು.
ಮೂವರಿಗೂ ಮಸಾಲೆ ದೋಸೆ ಆರ್ಡರ್ ಮಾಡಿ ಬಂದ ಪ್ರಶಾಂತ್.ಹೆಂಡತಿ,ಮಗಳನ್ನು ಅಲ್ಲೇ ಖುರ್ಚಿಯಲ್ಲಿ ಕೂರಿಸಿ ಬಂದಿದ್ದ.ಪಪ್ಪಾ ! ಬೇಗ ತಿಂಡಿ ಕೊಡಿಸು.ಹಸಿವಾಗ್ತಾ ಇದೆ.
ಮುಂದಿದ್ದ ಟೇಬಲ್ ಕುಟ್ಟುತ್ತ ಹೇಳಿತು ಪಾಪು.ಸ್ವಲ್ಪ ಇರೆ.ತರ್ತಾರೆ ..ಅಂತ ನಿಶಾ ಹೇಳಿದಾಗ ಸುಮ್ಮನೆ ಮುದುರಿ ಕುಳಿತಿತು. ಮುಂದೆ ಮಾತಾಡಿದರೆ ಅಮ್ಮ ಏಟು ಕೊಡುತ್ತಾಳೆ.ಅಂತ ಅದಕ್ಕೆ ಗೊತ್ತು.
ಬಿಸಿ ಬಿಸಿ ದೋಸೆ ಹಿಡಿದು ಪ್ರಶಾತ್ ಓಡಿ ಬಂದ.
ನೀ ಏನೇ ಹೇಳು..ನಿಶು. ಈ ಹೋಟೆಲ್ ದೋಸೆ ತುಂಬಾ ರುಚಿ ಅಲ್ವೇನೆ?.ಹೌದುರೀ..ನಂಗೂ ತುಂಬಾ ಇಷ್ಟ. ತುಂಬಾ ಪ್ರೀತಿ ಬಂದಾಗ ಅವನ ಬಾಯಲ್ಲಿ ನಿಶಾ ಹೋಗಿ ನಿಶು ಆಗುತಿದ್ದಳು.ಇದು ಅವಳಿಗೂ ಇಷ್ಟದ್ದು.

ರುಚಿಕಟ್ಟಾದ ಪಲ್ಯ ಸಾಂಬಾರಿನೊಂದಿಗೆ ದೋಸೆ ಖಾಲಿ ಮಾಡಿದರು.ಇನ್ನೊಂದು ದೋಸೆ ನಂಗೆ ಕಣ್ರೀ..ನಿಷಾಳಿಗೆ ಮತ್ತೊಂದು ದೋಸೆ ತಂದು ಕೊಟ್ಟು ,ತಾನು ಮಾತ್ರ ಮಗಳು ತಿಂದು ಮಿಕ್ಕಿದರಲ್ಲಿ ತಿಂದು ಮುಗಿಸಿದ.ಏನು ಕಂಜೂಸಪ್ಪ ನೀವು?ಇನ್ನೊಂದು ದೋಸೆ ತಗೋಬಾರದ?.ನಿಶಾಳ ಮಾತಿಗೆ ಸುಮ್ಮನೆ ನಕ್ಕ ಪ್ರಶಾಂತ್..ಅವನಿಗೆ ಗೊತ್ತು ಇನ್ನೊಂದು ದೋಸೆ ಎಂದರೆ ಮತ್ತೆ ೮೦ ರೂಪಾಯಿ ಕೊಡಬೇಕು ಅಂತ.
ಹಿತಮಿತವಾಗಿದ್ದರೆ ಮಾತ್ರ ಬೆಂಗಳೂರಿನಲ್ಲಿ ಸಂಸಾರ ಮಾಡಲು ಸಾಧ್ಯ ಅಂತ.ಆದರೆ ಅದನ್ನು ಹೆಂಡತಿಗೆ ಹೇಳಲಾರ.ಹೇಳಿದರೂ ಪ್ರಯೋಜನವಿಲ್ಲ ಅಂತ ಗೊತ್ತವನಿಗೆ. ಹೆಂಡತಿ ದುಂದು, ಧಾರಾಳ ಅಂತ ಖರ್ಚು ಮಾಡುವಷ್ಟು ಗಂಡ ಗಳಿಸಲೇ ಬೇಕು.ಇಲ್ಲದಿದ್ದರೆ ಸಂಸಾರದಲ್ಲಿ ಅರ್ಥವಿಲ್ಲ ಅನ್ನೋ ತತ್ವದವಳು ನಿಶಾ.
ಎರಡನೆಯ ದೋಸೆ ತಿಂದು ಮುಗಿಸಿದಳು ನಿಶಾ.
ರೀ..ಕಾಫಿ..
ಸರಿ ಅಂತ ಎದ್ದು ಹೋಗಿ ಬೈ ಟೂ ಕಾಫಿ ತಂದ.
ಕಾಫಿ ಗುಟುಕಿದೆ..ಕುಡಿದಂತೇ ಆಗುವದಿಲ್ಲ.ಬೈ ಟೂ ಯಾಕೆ ತಂದ್ರಿ..ಅಂತ ಗೊಣಗುಟ್ಟುತ್ತ ಕಾಫಿ ಖಾಲಿ ಮಾಡಿದಳು ನಿಶಾ.

(ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಈ ಹೊಸ ಧಾರಾವಾಹಿ ಬರೆಯುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ.ನಿಮ್ಮ ಬೆಂಬಲ ಸದಾ ಹೀಗೆ ಇರಲಿ)

Leave a Review

Share your thoughts and read what others had to say

Your Review

Did this story spark a memory or artistic inspiration? Share your thoughts below.

★ ★ ★ ★ ★
🌸

No reviews yet

Be the first to share your thoughts on this story!

← Previous Story ಅಂತರಂಗದ ತೆರೆ ಸರಿದಾಗ
Connect with Me