ಪ್ರೇಮದ ಸುಳಿಯಲ್ಲಿ

ಅಧ್ಯಯ - ೧

ನೋಡಿದಷ್ಟೂ ನೋಡಬೇಕೆನ್ನುವ ರೂಪವತಿ..ಕಾದಂಬರಿಗಳಲ್ಲಿ  ವರ್ಣಿಸಿದಂತೆ, ಕವಿಗಳ ಕವನದಲ್ಲಿರುವಂತೆ, ಚಿತ್ರಕಾರರ  ಕೈಯಲ್ಲಿ ಅರಳಿ ನಿಂತ  ಒಂದು ಸುಂದರ ವರ್ಣ ಚಿತ್ರದಂತೆ, ಬಲು ಅಪರೂಪದ  ಹೆಣ್ಣವಳು..ಸುಂದರಿಯರಲ್ಲಿ ಸುಂದರಿ ಆಕೆ...
ಹೆತ್ತವರಿಗಂತೂ  ಅವಳನ್ನು  ಎಲ್ಲಿಟ್ಟರೂ ತೃಪ್ತಿಯಿಲ್ಲ ..ಮೊದಲೇ ಶ್ರೀಮಂತ ಕುಟುಂಬ..ಒಂದೇ ಒಂದು  ಸಂತಾನ  ಬೇರೆ..ಲಕ್ಷ್ಮಿಯ  ಪೂರ್ಣ  ಕಟಾಕ್ಷ  ಇವರ ಮೇಲೆ ಇತ್ತೂಂತ  ಕಾಣುತ್ತೆ..ಮುಟ್ಟಿದ್ದೆಲ್ಲ  ಬಂಗಾರ..! ಮಾಡುವ  ಬಿಸಿನೆಸ್ ಎಲ್ಲ ಸಕ್ಸಸ್..!ಆಕೆಯನ್ನು  ಆ ಮನೆಯ ಮಹಾಲಕ್ಷ್ಮಿಗೆ  ಹೋಲಿಸುತಿದ್ದರು ..
ಆಕೆ ಹುಟ್ಟಿದ ಮೇಲೆಯೇ ಅವರಿಗೆಲ್ಲ  ಏಳಿಗೆ ಆಗಿತ್ತಂತೆ. ಹೀಗಾಗಿ  ಆಕೆ ಎಲ್ಲರ ಕಣ್ಮಣಿ..

ಭರ್ಜರಿ  ಬಂಗಲೆ, ಮನೆ ಮುಂದೆ ನಿಂತ ಹತ್ತಾರು ಕಾರುಗಳು, ಎಲ್ಲಿ ನೋಡಲ್ಲಿ ಆಳು, ಕಾಳುಗಳು....
ಮನೆಯ ಮುಂದೆ ದೊಡ್ಡದಾದ  ಹೂದೋಟ...ವಿವಿಧ ಹೂವುಗಳು, ಹಣ್ಣಿನ  ಗಿಡಗಳು, ಮತ್ತೆ  ಅಲಂಕಾರಿಕ  ಗಿಡಗಳಿಂದ  ಕಂಗೊಳಿಸುತ್ತಿತ್ತು ..ಹಣ್ಣಿಗಾಗಿ  ಬಂದು  ಗೂಡು ಕಟ್ಟಿಕೊಂಡು, ಅಲ್ಲೇ ವಾಸಿಸುತ್ತಿದ್ದ  ವಿವಿಧ  ಪಕ್ಷಿಗಳು.ಸಂಜೆಯಾದರೆ  ಸಾಕು  ಚಿಲಿ ಪಿಲಿ ಸದ್ದು  ತುಂಬುತಿತ್ತು...ಸೂರ್ಯ ತನ್ನ ಕೆಲಸ ಮುಗಿಸಿ  ಎಲ್ಲರಿಗೂ ಕೈ ಬೀಸುತ್ತ ಹೊರಟರೆ, ಇಲ್ಲಿ ಗೂಡು  ಸೇರಿದ ಹಕ್ಕಿಗಳು  ಸಂಭ್ರಮದಿಂದ  ತಮ್ಮ ತಮ್ಮ ಮರಿಗಳೊಡನೆ  ಸಂಭಾಷಿಸುತಿದ್ದವು...ಸಂಜೆಯ ವರೆಗೂ ಹಕ್ಕಿಗಳೂ  ಹೆತ್ತವರ ಮುಖ ನೋಡದೇ ಕುಳಿತಿದ್ದಕ್ಕೋ ಏನೋ  ಅವು  ಬಂದಾಗ  ಕಚ ಪಚ ಅಂತ ತಮ್ಮದೇ ಭಾಷೆಯಲ್ಲಿ  ಚಿವ್ ಗುಟ್ಟುವುದು  ನಡೆಯುತಿತ್ತು ...
ಅಲ್ಲಲ್ಲಿ ಕುಳಿತುಕೊಳ್ಳಲು  ಕಟ್ಟಿಸಿದ  ಬೆಂಚುಗಳ ಮೇಲೆ ಆಸೀನರಾಗಿ ಹರಟೆಗೆ ಇಳಿದಿದ್ದರು  ಆಳುಗಳು..
ಅರಮನೆಯಂಥ ಮನೆಯಲ್ಲಿ ಕುಳಿತು ಕಿಟಕಿಯಿಂದ  ಹೊರಗೆ  ನೋಡುತ್ತಿದ್ದಾಳೆ ಆ ಸುಂದರಿ ಅಮೂಲ್ಯ..ಮೆತ್ತನೆಯ  ದಿಂಬು ಬೆನ್ನಿಗೆ ಆಸರೆಯಾಗಿ  ಕುಳಿತಿದೆ..ಹೆಸರಿಗೆ ತಕ್ಕಂತೆ ಅತ್ಯಮೂಲ್ಯನೇ ಅವಳು..ನಿಧಾನದ ಸ್ವಭಾವ..ಯಾವುದಕ್ಕೂ ಆತುರವಿಲ್ಲ ,ಅವಸರವಿಲ್ಲ ....ಬಹುಷಃ ತಾಯಿಯ ಸ್ವಭಾವ ಬಳುವಳಿಯಾಗಿ  ಬಂದಿತ್ತೋ ಏನೋ..
ಅವಳ ಅಮ್ಮ ಸೌಭಾಗ್ಯಮ್ಮ ಕೂಡ ಹಾಗೇ ಇದ್ದರು..ಎಲ್ಲರನ್ನೂ ,ಎಲ್ಲವನ್ನೂ ಅಳೆದು, ತೂಗಿ ನೋಡಿ ಸಮಾಧಾನ  ಚಿತ್ತದಿಂದ  ಆಲೋಚನೆ ಮಾಡಿ, ತಮ್ಮ ನಿರ್ಧಾರ ಹೇಳುತ್ತಿದ್ದರು .ಅವರ  ಆ ಆಲೋಚನೆಗಳು ಯಾರಿಗೂ ನೋವಾಗದಂತೆ ಇರುತಿದ್ದವು ...ಎಲ್ಲ ನಿಮ್ಮ  ನಿರ್ಧಾರ ಸರಿ ಎನ್ನುವವರು.ಹೆಂಡತಿಯ ಎಲ್ಲ ಅಭಿಪ್ರಾಯಗಳಿಗೆ ತಮ್ಮ ಒಪ್ಪಿಗೆ ಮುದ್ರೆ ಕೊಂಚ  ತಡವಾಗಿ ಒತ್ತುತಿದ್ದರು ಆಕೆಯ ಪತಿ  ವೆಂಕಟೇಶರಾಯರು..
ಯಾಕೋ ಮೊದಲಿಂದಲೂ  ಕೊಂಚ  ಬಿಗುವಿನ ಮನುಷ್ಯ..ತಾನು ಹೇಳಿದ್ದೇ ಸರಿ ಎನ್ನುವವರು ..ಅದಕ್ಕಾಗಿಯೇ ಏನೋ
ಅಳು ಕಾಳುಗಳು ಅಮ್ಮನವರನ್ನು  ಹೆಚ್ಚು ಹಚ್ಚಿಕೊಂಡಿದ್ದರು .ಕಾರಣ ಇವರ ಕಷ್ಟ ನಷ್ಟಗಳನ್ನು  ಕೇಳುತ್ತಿದ್ದರು.. ಗಂಡನಿಗೆ ಗೊತ್ತಿಲ್ಲದಂತೆ ಕೈಲಾದ  ಸಹಾಯ ಕೂಡ ಮಾಡಿದ್ದುಂಟು ..
ಅಮ್ಮ..ಮಗುಗೆ ಹುಷಾರಿಲ್ಲ ..ಡಾಕ್ಟ್ರ್  ಹತ್ರ  ಕರ್ಕೊಂಡು ಹೋಗ್ಬೇಕು..
ಮನೆ ಅಡುಗೆಯವಳು ಮೂಲೆಯಲ್ಲಿ ನಿಂತು ಕೇಳಿದರೆ ಸಾಕು, ಸೌಭಾಗ್ಯಮ್ಮನಿಗೆ  ಅವಳಿಗೇನು ಬೇಕು ಎನ್ನೋದು ಅರ್ಥವಾಗೋದು..
ಅಡುಗೆ ಏನು ಬೇಡ..ನೀನು ಮೊದಲು ಮನೆಗೆ ಹೋಗಿ ಮಗುವನ್ನು  ಸುಧಾರಿಸು..ಹಾಂ..ಹಾಗೆ ಹೋಗ್ತಾ ಸಾರು, ಅನ್ನ ಒಂದು ಡಬ್ಬದಲ್ಲಿ ಹಾಕಿಕೊಂಡು  ಹೋಗು...
ಕೊಂಚ ಇರು ಬಂದೆ..
ಎನ್ನುತ್ತಾ  ಒಳಗೆ ಹೋಗಿ  ಕೈಯಲ್ಲಿ ಹಣ ಹಿಡಿದು ಬಂದು, ಅಡುಗೆಯವಳ ಕೈಯಲ್ಲಿಟ್ಟಾಗ  ಸಮಾಧಾನ ಅವರಿಗೆ..ಹಾಗೆ ಕೊಡುವಾಗ ಪತಿ ಎಲ್ಲಿ ನೋಡುವರೋ ಎನ್ನುವ ಭಯ ಕಾಡಿದ್ದುಂಟು ಅವರಿಗೆ.
ಯಜಮಾನಿ  ಹಣ ಭದ್ರವಾಗಿ  ಹಿಡಿದುಕೊಂಡು ಮನದಲ್ಲೇ  ಅವರಿಗೊಂದು  ನಮಸ್ಕಾರ ಹಾಕಿ, ಹೋದಳು ಅಡುಗೆಯವಳು .
ತಣ್ಣಗಿರಲಿ ಈ ಮನೆ ಎನ್ನುವ  ಉದ್ಘಾರ ಅವಳಿಂದ. ಬಹುಷಃ ಅದೇ ಆ ಮನೆಯನ್ನು ಕಾಯುತಿತ್ತೊ ಏನೋ?

ಮುಂದುವರೆಯುವುದು .....

Leave a Review

Share your thoughts and read what others had to say

Your Review

Did this story spark a memory or artistic inspiration? Share your thoughts below.

★ ★ ★ ★ ★
🌸

No reviews yet

Be the first to share your thoughts on this story!

← Previous Story ಗುಂಡ ಗುಂಡಿಯ ಹಾಸ್ಯ ಪ್ರಸಂಗಗಳು
Connect with Me