ಪ್ರೇಮದ ಸುಳಿಯಲ್ಲಿ

ಭಾಗ- ೩

ಪ್ರೀಯ ಓದುಗರಲ್ಲಿ ಒಂದು ವಿನಂತಿ.ಎಂದಿನಂತೆ ಯಾವುದೋ ವಿಷಯ ಹೊಳೆದು ಧಾರಾವಾಹಿ ಬರೆಯಲು ಕೈ ಹಾಕಿದ್ದೇನೆ.ಇದು ನನ್ನಯ ಕಲ್ಪನೆಯ ಕತೆ ..ಯಾರಿಗೋ, ಯಾವುದಕ್ಕೂ ತಾಳೆಯಾದರೆ ಅದು ಕೇವಲ ಕಾಕತಾಳಿಯ ಅಷ್ಟೇ.ಓದುತ್ತಿರುವ ನಿಮಗೆಲ್ಲರಿಗೂ ನನ್ನಯ ನಮನಗಳು.🙏🙏

ಅಮ್ಮ..! ಅಮ್ಮ...!

ತಮ್ಮನ್ನು ಯಾರೋ ಕರೆಯುತ್ತಿದ್ದ ಧ್ವನಿ ಕೇಳಿ ಹೊರ ಬಂದರು ಸೌಭಾಗ್ಯಮ್ಮ ..
ಕಟ್ಟು ಮಸ್ತಾದ ತರುಣನೊಬ್ಬ ನಿಂತಿದ್ದ.

ಯಾವುದೋ ಹೊಸ ಮುಖ.
ನೀನು ಯಾರಪ್ಪ? ಗೊತ್ತಾಗಲಿಲ್ಲ .
ಸೌಭಾಗ್ಯಮ್ಮ ಅವನನ್ನೇ ನೋಡುತ್ತಾ ಕೇಳಿದರು.
ತಮಗಿಂತ ದೂರದಲ್ಲಿ ನಿಂತು, ತಮ್ಮತ್ತ ಕೈ ಮುಗಿದು ನೋಡುತ್ತಿರುವ ಈ ಯುವಕ ಯಾರು? ನಮ್ಮ ಮನೆಯಲ್ಲಿ ಇವನಿಗೇನು ಕೆಲಸ? ಮೊದಲು ಇಲ್ಲೆಯೇ ಇದ್ದು ಕೆಲಸ ಮಾಡಿದವನ ? ಆದರೆ ನನ್ನ ಜ್ಞಾಪಕ ಶಕ್ತಿಯ ಪ್ರಕಾರ ಈ ವಯಸ್ಸಿನವರು ಯಾರೂ ನಮ್ಮ ಮನೆಯಲ್ಲಿ ಇಲ್ಲವಲ್ಲ?

ಸೌಭಾಗ್ಯಮ್ಮನ ಪ್ರಶ್ನೆ ಉತ್ತರಿಸುವಂತೆ ಕೈ ಮುಗಿದುಕೊಂಡೇ ಕೊಂಚ ಮುಂದೆ ಬಂದ ಆ ನವ ತರುಣ..ಕೊಂಚ ಬೆಳಕಿಗೆ ಬಂದ ಅವನು ಬಲು ಸುಂದರ ಎನ್ನುವುದು ಸೌಭಾಗ್ಯಮ್ಮನಿಗೆ ಅನ್ನಿಸಿತು.

ಅಮ್ಮ...! ನಾನು ಈ ದಿನವೇ ಕೆಲಸಕ್ಕೆ ಬಂದಿರುವುದು ..ಹಾಗಾಗಿ ನೀವು ನನ್ನ ಈ ಮೊದಲು ಕಂಡಿರುವದಕ್ಕೆ ಸಾಧ್ಯವೇ ಇಲ್ಲಮ್ಮ..
ವಿನೀತನಾಗಿ ನಿಂತಿದ್ದ ತರುಣ ಸೌಭಾಗ್ಯಮ್ಮನ ಪ್ರಶ್ನೆಗೆ ಉತ್ತರಿಸಿದ.

ಯಜಮಾನರು ಕೆಲಸಕ್ಕೆ ಕರೆದಿರಬಹುದು.ನನಗೇ ಒಮ್ಮೊಮ್ಮೆ ಗೊತ್ತಿರುವದಿಲ್ಲವಪ್ಪಾ ...

ಅಲ್ಲೇ ಇದ್ದ ಕುರ್ಚಿಯಲ್ಲಿ ಆಸೀನರಾದರು ಸೌಭಾಗ್ಯಮ್ಮ .
ಇಲ್ಲಮ್ಮ. ನನ್ನನ್ನು ನನ್ನ ತಂದೆ ಕಳಿಸಿದ್ದಾರೆ. ಅದೇ ನಿಮ್ಮಲ್ಲಿ ಡ್ರೈವರ್ ಕೆಲಸ ಮಾಡುತ್ತಾರಲ್ಲ ?
ಇವರಲ್ಲಿ ೪ ,೫ ಡ್ರೈವರ್ ಇದ್ದರು. ಅವರಲ್ಲಿ ಇವನ ತಂದೆ ಯಾರಿರಬಹುದು ?
ನಿನ್ನ ತಂದೆಯ ಹೆಸರೇನಪ್ಪಾ?
ಲಕ್ಷ್ಮಣ ಅಮ್ಮ..
ಉತ್ತರಿಸಿದ ಯುವಕ.
ಅರೇ..ಲಕ್ಷ್ಮಣನ ಮಗನೇ ನೀನು?
ಹೌದು ಅಮ್ಮ..ಅಪ್ಪನಿಗೆ ಹುಷಾರಿಲ್ಲ ,ಹಾಗಾಗಿ ನನ್ನನ್ನು ಕಳಿಸಿದ್ದಾರೆ.
ತುಂಬಾ ಖುಷಿಯಾಯಿತಪ್ಪ ನಿನ್ನ ನೋಡಿ.ಲಕ್ಷ್ಮಣ ನಿಗೆ ಏನಾಗಿದೆ? ಕಕ್ಕುಲತೆಯಿಂದ ಕೇಳಿದರು ಸೌಭಾಗ್ಯಮ್ಮ .
ಲಕ್ಷ್ಮಣ ತುಂಬಾ ವರ್ಷದಿಂದ ಇವರ ಮನೆಯಲ್ಲಿ ಡ್ರೈವರ್ ಆಗಿದ್ದ. ತುಂಬಾ ನಿಷ್ಠಾವಂತ ವ್ಯಕ್ತಿ..ತನ್ನ ಮನೆ ಕೆಲಸವೆಂದೇ ತಿಳಿದು, ಇವರ ಕೆಲಸ ಮಾಡುತಿದ್ದ..ಹಾಗಾಗಿ ಅವರ ಮನದಲ್ಲಿ
ಲಕ್ಷ್ಮನಿಗೆ ವಿಶೇಷ ಸ್ಥಾನ..ಅಮುಲ್ಯಳನ್ನು ಎಲ್ಲಿಯಾದರೂ ಸುರಕ್ಷಿತವಾಗಿ ಕರೆದುಕೊಂಡು ಹೋಗುವುದು ಅವನ ಕೆಲಸವಾಗಿತ್ತು.ವೆಂಕಟೇಶರಾಯರಾದರೂ ಲಕ್ಷ್ಮಣನನ್ನೇ ಕರೆದುಕೊಂಡು ಹೋಗುತಿದ್ದರು .ಅಂತ ನಂಬಿಕಸ್ತ ಡ್ರೈವರ್ ಸಿಕ್ಕಿದ್ದು ನಮ್ಮ ಪುಣ್ಯ ಅನ್ನೋದು ಸೌಭಾಗ್ಯಮ್ಮನ ಅನಿಸಿಕೆ.
ಮನೆಯವರೆಲ್ಲ ಮೆಚ್ಚಿನ ಡ್ರೈವರ್ ಅವನಾಗಿದ್ದ. ಎಷ್ಟೇ ಹತ್ತಿರದವನಾಗಿದ್ದರೂ ಒಂದು ಸಾರಿ ಕೂಡ ತನ್ನ ಸಂಸಾರದ ಪರಿಚಯ ಮಾಡಿಸಿರಲಿಲ್ಲ ಇವರಿಗೆ. ಹೀಗಾಗಿ ಈ ತರುಣನನ್ನು ಇದೇ ಸಲವೇ ಸೌಭಾಗ್ಯಮ್ಮ ನೋಡಿದ್ದು.
ಯಾಕೋ ನೋಡುತ್ತಿದ್ದಂತೆ ತುಂಬಾ ಮನಸ್ಸಿಗೆ ಹಿಡಿಸಿದ., ಹತ್ತಿರದ ಎನ್ನಿಸಿದ..ಅದು ಅವರ ಒಳ್ಳೆ ಮನಸ್ಸಿನ ಕಾರಣವಿರಬಹುದು ...ಲಕ್ಷ್ಮಣನ ಮಗ ಅಂದರೆ ಇವನೂ ಒಳ್ಳೆಯವನೇ ಇರುತ್ತಾನೆ. ಮನದಲ್ಲೇ ಮತ್ತೆ ಅಂದುಕೊಂಡರು.

ಹೌದೇನಪ್ಪಾ..ಒಳ್ಳೆಯದಾಯಿತು ಬಿಡು ..ಲಕ್ಷ್ಮಣ ತುಂಬಾ ಒಳ್ಳೆಯವನು ಕಣಪ್ಪ. ನನಗಂತೂ ಮನೆಯವನಂತೆ. ಡಾಕ್ಟರ್ ಕಡೆ ಹೋಗಿದ್ನ? ಇಲ್ಲ ನಮ್ಮ ಮನೆ ಡಾಕ್ಟ್ರರನ್ನ ಕಳಿಸಲಾ?

ಸೌಭಾಗ್ಯಮ್ಮನ ಸ್ವಭಾವದ ಬಗ್ಗೆ ಆಗಾಗ ತಂದೆ ಹೇಳುತ್ತಿದ್ದುದು ಜ್ಞಾಪಕಕ್ಕೆ ಬಂತು ಅವನಿಗೆ.ಅವರನ್ನು ನೋಡಿದ ಮೇಲೆ ತಂದೆ ಹೇಳಿದ್ದು ಸರಿ ಅಂತ ಅನಿಸಿತವನಿಗೆ.

ರೇಷ್ಮೆ ಸೀರೆಯನ್ನು ನೀಟಾಗಿ ಉಟ್ಟುಕೊಂಡು,ಮೈ ಮುಚ್ಚುವಂತೆ ಸೆರಗು ಹೊದ್ದು ಕುಳಿತ ಅವರು ದೇವತೆಯಂತೆ ಕಂಡರು ಅವನ ಕಣ್ಣಿಗೆ. ಹಣೆಗೆ ದೊಡ್ಡನೆಯ ಕೆಂಪು ಕುಂಕುಮ, ಕೆನ್ನೆಗೆ ಹಚ್ಚಿದ ಅರಿಸಿನ, ಕೆಂಪು ಬಳೆಗಳ ಮಧ್ಯೆ ಮಿಂಚುವ ವಜ್ರದ ಬಳೆಗಳು, ಕೂದಲನ್ನು ತುರುಬಿನ ಆಕಾರಕ್ಕೆ ಕಟ್ಟಿ, ಮಲ್ಲಿಗೆ ಮಾಲೆ ಮುಡಿದ ಆಕೆಯ ಪ್ರಶಾಂತ ಮುಖ ನೋಡಿದ ...ಆಕೆಯ ಕಣ್ಣಲ್ಲಿ ಸೂಸುತಿದ್ದ ಮಾತೃ ಪ್ರೇಮವನ್ನು ಗುರುತಿಸಿದ.

ನಿನ್ನ ಹೆಸರೇನಪ್ಪಾ ?
ಸೌಭಾಗ್ಯಮ್ಮನ ಧ್ವನಿಗೆ ಎಚ್ಛೆತ್ತು,

ಮನೋಹರ.....ಮತ್ತೆ ಅಪ್ಪನನ್ನು ಡಾಕ್ಟರ್ ಹತ್ತಿರ ತೋರಿಸಿಯೇ ಬಂದಿದ್ದು. ಸ್ವಲ್ಪ ರೆಸ್ಟ್ ಕೊಡಿಸಿ ಅಂದಿದ್ದಾರೆ ಅಮ್ಮ..
ಉತ್ತರಿಸಿದ ತರುಣ.
ಅನಾಯಾಸವಾಗಿ ಅಮ್ಮ ಎನ್ನುವ ಪದ ಅವನ ಬಾಯಿಂದ ಬರುತಿತ್ತು..

ಒಳ್ಳೆಯದಪ್ಪ...! ಅಲ್ಲೇ ಕೀ ಇದೆ. ತಗೋ.

ಲಕ್ಷ್ಮಣನಿಗೆ ಅಂಥದ್ದೇನೂ ಆಗಿಲ್ಲ ಅಂತ ತಿಳಿದು ಸೌಭಾಗ್ಯಮ್ಮನಿಗೆ ಸಮಾಧಾನವಾಯಿತು.ಸ್ವಲ್ಪ ರೆಸ್ಟ್ ಮಾಡಲಿ. ಆಮೇಲೆ ಬರುತ್ತಾನೆ.
ಗೋಡೆಗೆ ನೇತು ಹಾಕಿದ್ದ ಕೀ ತಗೊಂಡು ,ಮತ್ತೊಮ್ಮೆ ಸೌಭಾಗ್ಯನಿಗೊಮ್ಮೆ ನಮಸ್ಕರಿಸಿ ,ಹೊರ ನಡೆದ.
ಮನೆಯಿಂದ ಹೊರ ಬಂದು ಜೋರಾಗಿ ಉಸಿರು ಎಳೆದುಕೊಂಡ..ಅವನು ಜೀವಮಾನದಲ್ಲಿ ನೋಡಲಾರದಂಥ ಭವ್ಯ ಬಂಗಲೆಯ ದರ್ಶನವಾಗಿತ್ತು. ದೊಡ್ಡ ಹಾಲು, ಅದರ ತುಂಬಾ ಇಟ್ಟ ಬೆಲೆ ಬಾಳುವ ಪೀಠೋಪಕರಣಗಳು ,ಮಕ್ಮಲ್ ಕಾಲು ಹಾಸುಗಳು , ದೊಡ್ಡ ದೊಡ್ಡ ಹೂದಾನಿಗಳು, ಗೋಡೆಗೆ ನಿಂತು ಹಾಕಿದ್ದ ಬ್ರಹದ್ದಕಾರದ ಟಿ.ವಿ. ....ಒಂದೇ ಎರಡೇ..
ತಲೆ ಎತ್ತಿ ನೋಡಿದರೆ ದೊಡ್ಡ ಜುಮ್ಮರ್ ಬೆಳಕನ್ನು ಚೆಲ್ಲಿದೆ .. ಗೋಡೆಯುದ್ದಕ್ಕೂ ಇಳಿ ಬಿಟ್ಟ ತಿಳಿ ಹಸಿರು ಬಣ್ಣದ ತೆಳುವಾದ ಪರದೆಗಳು ಗಾಳಿ ಬಿಸಿದಾಗ ಮೆಲ್ಲನೆ
ಸರಿಯುತ್ತಿದ್ದವು..ಸೋಫಾಗಳಿಗೆ ಅನಿಸಿಟ್ಟ ಕುಸುರಿ ಕೆತ್ತನೆಯ ದೊಡ್ಡ ದೊಡ್ಡ ದಿಂಬುಗಳು, ತನ್ನಯ ಪರಿಮಳ ಚೆಲ್ಲುತ್ತ ನಸು ನಗುತ್ತಿರುವ ಚೆಂಗುಲಾಬಿ ಅಂದವಾಗಿ ಅಲಂಕರಿಸಿಕೊಂಡು ಹೂದಾನಿಯಲ್ಲಿ ಕುಳಿತಿದೆ..ಆ ದೊಡ್ಡ ಹಾಲ್ ಅವರಿದಿತ್ತು ಎಂಥದೋ ಸುಂಗಧ....
ಅದನ್ನೆಲ್ಲಾ ನೋಡುತ್ತಾ
ಮೈ ಮರೆತಿದ್ದ ಮನೋಹರ ..ಏನಿದು ಈ ವೈಭವ?
ತಂದೆ ಬಾಯಿಂದ ಕೇಳಿದ್ದ ವರ್ಣನೆ ತುಂಬಾ ಕಡಿಮೆ ಎನಿಸಿತು. ಮನೋಹರನದು ಒಂದು ವಿನಯ ತುಂಬಿದ ವ್ಯಕ್ತಿತ್ವ. ಯಾವುದಕ್ಕೂ ಅಸೆ ಪಟ್ಟವನಲ್ಲ .ಚಿಕ್ಕಂದಿನಿಂದಲೂ ಸ್ವಾಭಿಮಾನದಲ್ಲೇ ಬೆಳೆದವ. ಅದು ಎಷ್ಟರ ಮಟ್ಟಿಗೆ ಅಂದರೆ ನನ್ನ ತಂದೆ ಡ್ರೈವರ್ ಎಂದೇ ಹೆಮ್ಮೆಯಿಂದ ಗೆಳೆಯರಿಗೆ ಪರಿಚಯ ಮಾಡಿಕೊಳ್ಳುತಿದ್ದ .ಇಲ್ಲದ, ಸಲ್ಲದ ಒಣ ಜಂಬದ ,ಬೂಟಾಟಿಕೆಯ ಮಾತುಗಳನ್ನಾಡುತ್ತಿರಲಿಲ್ಲ ..ಒಣ ಪ್ರತಿಷ್ಠೆಯವರನ್ನು ನೋಡಿದರೆ ಮಾರು ದೂರ ಓದುತಿದ್ದ.ತನ್ನ ತಂದೆಯ ಬಗ್ಗೆ ತುಂಬಾ ಗೌರವ, ಆದರ..
ತಾನು ಮುಂದೆ ತುಂಬಾ ಓದಿ, ವಿದ್ಯಾವಂತನಾಗಿ ಅಪ್ಪನಿಗೆ ಕೊಂಚ ವಿಶ್ರಾಂತಿ ಕೊಡಿಸಬೇಕು ಅಂತ ಅಂದುಕೊಂಡಿದ್ದ.

ಮುಂದುವರೆಯುವುದು ....

Leave a Review

Share your thoughts and read what others had to say

Your Review

Did this story spark a memory or artistic inspiration? Share your thoughts below.

★ ★ ★ ★ ★
🌸

No reviews yet

Be the first to share your thoughts on this story!

← Previous Story ಗುಂಡ ಗುಂಡಿಯ ಹಾಸ್ಯ ಪ್ರಸಂಗಗಳು
Connect with Me